JNU Kannada ರಾಜ್ಯ ಸರಕಾರದಿಂದ ಜೆಎನ್ ಯು ಕನ್ನಡ ಪೀಠದ ಅವಗಣನೆ

 


ಕನ್ನಡದ ಬಗ್ಗೆ ಪೊಳ್ಳು ಭಾಷಾ ಪ್ರೇಮ ಪ್ರದರ್ಶಿಸುವ ರಾಜ್ಯ ಸರಕಾರವು  ದೆಹಲಿಯ ಜವಾಹರಲಾಲ್  ವಿಶ್ವವಿದ್ಯಾಲಯದಲ್ಲಿ (ಜೆಎನ್ ಯು)ಅತ್ಯುತ್ಸಾಹದಿಂದ 2015ರಲ್ಲಿ  ಸ್ಥಾಪಿಸಲಾದ ಕನ್ನಡ ಪೀಠಕ್ಕೆ ಕಳೆದ ಮೂರು ವರ್ಷಗಳಿಂದ ಮುಖ್ಯಸ್ಥರ ನೇಮಕ  ಮಾಡದೆ ಅವಗಣಿಸಿದೆ. ಮುಖ್ಯಸ್ಥರು, ಸಿಬಂದಿ ಇಲ್ಲದೆ ಪೀಠದ ಚಟುವಟಿಕೆ ಸ್ಥಗಿತಗೊಂಡಿದೆ.

ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಜೆಎನ್ ಯು ಕನ್ನಡ  ಪೀಠದ ಆರಂಭಿಸಲಾಗಿತ್ತು.  ಪೀಠ ನಡೆಸಲು ಅನುದಾನ  ರಾಜ್ಯ ಸರಕಾರ  ನೀಡುವುದಾದರು ಪೀಠದ     ಮುಖ್ಯಸ್ಥರ   ನೇಮಕ  ಮಾಡುವ ಜವಾಬ್ದಾರಿ ಜವಾಹರಲಾಲ್  ವಿಶ್ವವಿದ್ಯಾಲಯದ್ದು.

ಜೆಎನ್ ಯು    ಕನ್ನಡ ಪೀಠವು ದೇಶದ ರಾಜಧಾನಿಯಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉನ್ನತ  ಮಟ್ಟದಲ್ಲಿ ಅಧ್ಯಯನ ಸಂಶೋಧನೆ  ಮತ್ತು ಪ್ರಸಾರ ಮಾಡುವ ಉದ್ದೇಶದಿಂದ ಸ್ಥಾಪಿತವಾದ ಮಹತ್ವದ ಕನ್ನಡ ಕೇಂದ್ರವಾಗಿದೆ.  ದೆಹಲಿಯಲ್ಲಿ ಹಿಂದಿ, ಉರ್ದು ಭಾಷೆಗಳೊಂದಿಗೆ ದಕ್ಷಿಣ ಭಾರತದ ಭಾಷೆಗಳಿಗೆ ಕೂಡ  ಮಹತ್ವ ನೀಡುವುದು  ಮತ್ತು ಶಾಸ್ತ್ರೀಯ ಭಾಷೆಯಾಗಿ ಪರಿಗಣಿತವಾದ ಕನ್ನಡ  ಭಾಷಾ ಕೇಂದ್ರವೊಂದು ರಾಜಧಾನಿಯಲ್ಲಿ ಇರಬೇಕು ಎಂಬ ಉದ್ದೇಶದಿಂದ ಸರಕಾರ ಕನ್ನಡ ಪೀಠವನ್ನು ಆರಂಭಿಸಿತ್ತು. ಪೀಠದ ಮೊದಲ ಮುಖ್ಯಸ್ಥರಾಗಿದ್ದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಅವಧಿಯಲ್ಲಿ ಹಲವು ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದರು.                                                         

2023ರಲ್ಲಿ  ಆಗಸ್ಚ್ ತಿಂಗಳಲ್ಲಿ ಜೆಎನ್ ಯು ಕನ್ನಡ  ಪೀಠದ ಮುಖ್ಯಸ್ಥರಾಗಿದ್ದ ಪ್ರೊ. ವಿಶ್ವನಾಥ್ ಅವರ ಕಾಲಾವಧಿ  ಮುಕ್ತಾಯಗೊಂಡ ಮೇಲೆ ಮುಖ್ಯಸ್ಥರ   ಹುದ್ದೆ  ಭರ್ತಿ ಆಗಿಲ್ಲ. ಕರ್ನಾಟಕ ಸರಕಾರದ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ಮತ್ತು ಜವಾಹರಲಾಲ್  ವಿಶ್ವವಿದ್ಯಾಲಯ ನಡುವಣ ಒಪ್ಪಂದ ಪ್ರಕಾರ ಕನ್ನಡ  ಪೀಠ ರಚಿಸಲಾಗಿತ್ತು. ಜೆಎನ್ ಯುನ ಭಾರತೀಯ ಭಾಷಾ ಕೇಂದ್ರ, ಭಾಷಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಶಾಲೆ ವಿಭಾಗದಲ್ಲಿ ಭಾಷಾ ಅಧ್ಯಯನ ಪೀಠಗಳು ಕಾರ್ಯಚರಿಸುತ್ತವೆ.

ಅನುದಾನ  ಕೊರತೆ, ನೌಕರಶಾಹಿಯ ರೆಡ್ ಟೇಪಿಸಮ್, ರಾಜ್ಯ ಸರಕಾರ  ಉದಾಸೀನತೆ ದೀರ್ಘ ಕಾಲದಿಂದ ಜೆಎನ್ ಯು ಕನ್ನಡ  ಪೀಠ ಮುಖ್ಯಸ್ಥರಿಲ್ಲದೆ ಕಾರ್ಯಚಟುವಟಿಕೆ ನಿಲ್ಲಿಸಿದೆ. ಇಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಪೀಠದ ಮೊದಲ ಮುಖ್ಯಸ್ಥರಾಗಿದ್ದರು. ರಾಜ್ಯಸರಕಾರದ ಮಾಸಿಕ   ಅನುದಾನದ ಬದಲು ವನ್ ಟೈಂ ಗ್ರಾಂಟ್  ಠೇವಣಿ ಇರಿಸಿ ಅದರ ಬಡ್ಡಿಯಲ್ಲಿ ಪೀಠ ನಡೆಯುತಿತ್ತು. ಹೆಚ್ಚುಕಡಿಮೆ  ಪ್ರೊಫೆಸರ್ ಸ್ತರದ ಮುಖ್ಯಸ್ಥನ ವೇತನಕ್ಕೆ ಸಾಕಾಗುತಿತ್ತು.

ಜೆಎನ್ ಯು ಕನ್ನಡ ಪೀಠ  2015ರಲ್ಲಿ ಆರಂಭವಾದ  ಅನಂತರ ಸರಕಾರ ನೀಡಿದ 5 ಕೋಟಿ ರೂಪಾಯಿ ಠೇವಣಿ ಇರಿಸಿತ್ತು.                 ಅದನ್ನು   ಕನಿಷ್ಟ  ಹತ್ತು ಕೋಟಿ ರೂಪಾಯಿಗೆ ಏರಿಸಬೇಕೆಂದು  ಜೆಎನ್ ಯು ಸೂಚಿಸಿತ್ತು. ಬಗ್ಗೆ ಸಾಕಷ್ಟು ಚರ್ಚೆನಡೆದಿದೆ.  ಆದರೆ , ಸರಕಾರ ಸಕರಾತ್ಮಕ ಹೆಜ್ಜೆ ಇರಿಸಿಲ್ಲ.

ತುಮಕೂರು ವಿಶ್ವವಿದ್ಯಾಲಯದಲ್ಲಿ 2023ರಲ್ಲಿ  ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಜೆಎನ್ ಯು ಕುಲವಪತಿ ಪ್ರೊ.ಸಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು   ಅಲ್ಲೆ ಉಪಸ್ಥಿತರಿದ್ದ  ಉನ್ನತ ಶಿಕ್ಣಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ 10  ಕೋಟಿ ರೂಪಾಯಿ ನೀಡುವಂತೆ ವಿನಂತಿಸಿದ್ದರು.

ಸದ್ಯ ಮೊತ್ತದಿಂದ ಬರುವ ಬಡ್ಡಿಯಲ್ಲಿ ಪ್ರೊಫೆಸರ್ ಒಬ್ಬರ ವೇತನ ನೀಡುವುದು ಅಸಾಧ್ಯ. ಆದುದರಿಂದ ಹೆಚ್ಚುವರಿ ಅನುದಾನ ನೀಡಬೇಕು.  ಅಥವ ಸಹಾಯಕ ಪ್ರೊಫೆಸರ್ ಸಮಾನಾದ ಮುಖ್ಯಸ್ಥನ ನೇಮಕ  ಮಾಡಬೇಕು. ಇದಕ್ಕಾಗಿ   ಪರಸ್ಪರ ತಿಳುವಳಿಕೆ ಒಪ್ಪಂದದಲ್ಲಿ  ಸಣ್ಣ ತಿದ್ದುಪಡಿ  ಮಾಡಬೇಕು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಿಷ್ಕೃತ ಒಪ್ಪಂದವನ್ನು ರಚಿಸಿದ್ದು, ಕಾನೂನು ಮತ್ತು    ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಕಡತ ಹಲವು ತಿಂಗಳಿನಿಂದ ಕನ್ನಡ  ಮತ್ತು ಸಂಸ್ಕೃತಿ  ಇಲಾಖೆಯ ಹಿರಿಯ ಅಧಿಕಾರಿಯ ಕಚೇರಿಯಲ್ಲಿ ಕೆಂಪುಪಟ್ಟಿಯಲ್ಲಿ ಭದ್ರವಾಗಿದೆ.

ಕನ್ನಡ ಭಾಷೆಗಾಗಿ ಠೇವಣಿ ಇರಿಸಲು ಬೇಕಾದ ಹೆಚ್ಚುವರಿ ಅನುದಾನ  ಒದಗಿಸುವ ಸಾಮರ್ಥ್ಯ ಗ್ಯಾರಂಟಿ  ಸರಕಾರಕ್ಕೆ ಇಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೀಗಿರುವಾಗ ಸಹಾಯಕ ಪ್ರೊಫೆಸರ್ ಸಮಾನಾದ ಮುಖ್ಯಸ್ಥನ ನೇಮಕ  ಮಾಡಲು ಬೇಕಾದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.

         

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು