| Seaplane | Water metro |
ಮಂಗಳೂರಿಗೆ ಶೀಘ್ರವೇ ಬರಲಿದೆ ಸೀಪ್ಲೇನ್, ವಾಟರ್ ಮೆಟ್ರೊ
| Seaplane | Water metro | ವರುಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಮಹತ್ವಾಂಕಾಂಕ್ಷೆಯ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎಲ್ಲವೂ ಯೋಜಿಸಿದಂತೆ ನಡೆದರೆ ವರ್ಷಾಂತ್ಯಕ್ಕೆ ಮಂಗಳೂರು ಮತ್ತು ಎಚ್.ಡಿ.ಕೋಟೆ ನಡುವೆ ರಾಜ್ಯದ ಮೊಟ್ಟಮೊದಲ ಸೀಪ್ಲೇನ್ ಹಾರಾಟ ನಡೆಯಲಿದೆ.
ಇದರೊಂದಿಗೆ ಮತ್ತೊಂದು ಬಹುನಿರೀಕ್ಷೆಯ ವಾಟರ್ ಮೆಟ್ರೋ (Water Metro) ಸೇವೆ ಮಂಗಳೂರು ನೇತ್ರಾವತಿ ನದಿ ತೀರದ ಬಜಾಲ್ ನಿಂದ ತೊಡಗಿ ಗುರುಪುರ ನದಿಯ ಮರವೂರು ಸೇತುವೆ ತನಕ ಆರಂಭವಾಗಲಿದೆ. ಸುಮಾರು 30 ಕಿಮೀ ಜಲ ಹಾದಿಯಲ್ಲಿ 17 ನಿಲ್ದಾಣಗಳು ಸಿದ್ಧವಾಗಲಿದೆ. ಕರ್ನಾಟಕ ಜಲಸಾರಿಗೆ ಮಂಡಳಿ (KARNATAKA MARITIME BOARD) ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ.
ಮಂಗಳೂರು-ಕಬಿನಿ ನಡುವಣ ಜಲಾಶಯದಲ್ಲಿ ಲ್ಯಾಂಡ್ ಆಗುವ ಕಿರು ವಿಮಾನ ಹಾರಾಟ ನಿರ್ವಹಣೆಗೆ ಹಲವು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿದ್ದು, ಪ್ರವಾಸೋದ್ಯಮ ಇಲಾಖೆ ಆಸಕ್ತರಿಂದ ಪ್ರಸ್ತಾವಣೆಗಳನ್ನು ಆಹ್ವಾನಿಸಿತ್ತು.
ಉಡೇ ದೇಶ್ ಕ ಆಮ್ ನಾಗರಿಕ್ ಅರ್ಥಾತ್ UDAN ಯೋಜನೆಯ ಸಹಕಾರದೊಂದಿಗೆ ಕರ್ನಾಟಕ ಸರಕಾರ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸ್ಥಳೀಯ ಸಂಚಾರ ಸೌಲಭ್ಯ ಹೆಚ್ಚಿಸುವ ಉದ್ದೇಶದೊಂದಿಗೆ ಕರಾವಳಿಯ ನದಿ ತೀರಗಳು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಸೀಪ್ಲೇನ್ (Seaplane) ಎರೋಡೊಮ್ ಗಳನ್ನು ಸ್ಥಾಪಿಸಲು ಮುಂದಾಗಿದೆ.
ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗುರುಪುರ ನದಿಯಿಂದ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ನಡುವೆ 17 ಸೀಟುಗಳ ಚಿಕ್ಕಗಾತ್ರದ ವಿಮಾನ ಹಾರಾಟ ನಡೆಯಲಿದೆ. ನೀರಿನಲ್ಲಿ ತೇಲುವಂತೆ ರೂಪಿಸಲಾದ ಈ “ಜಲ ವಿಮಾನ” ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಗೆ ದುಬಾರಿ ವೆಚ್ಚದಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣ ಬೇಕಾಗಿಲ್ಲ.
ಕೇರಳದಲ್ಲಿ ಹತ್ತು ವರ್ಷಗಳ ಹಿಂದೆ ಜಲವಿಮಾನ ಯಾನದ ಪ್ರಯೋಗಿಕ ಹಾರಾಟದ ನಡೆಸಲಾಗಿತ್ತಾದರು ಸ್ಥಳೀಯ ಮೀನುಗಾರರ ವಿರೋಧದಿಂದ ಹಿನ್ನಡೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಕೊಚ್ಚಿ ಮತ್ತು ಮುನ್ನಾರ್ ನಡುವೆ ಸೀಪ್ಲೇನ್ ಸೇವೆ ಆರಂಭಗೊಂಡಿದೆ.
ಮಂಗಳೂರು – ಕಬಿನಿ ನಡುವೆ ಸೀಪ್ಲೇನ್ ಹಾರಾಟ ಯೋಜನೆಗೆ ಸರಕಾರ ಕಳೆದ ವರ್ಷವೇ ಮಂಜೂರಾತಿ ನೀಡಿದೆ. ಕಳೆದ ತಿಂಗಳು ಪ್ರವಾಸೋದ್ಯಮ ಇಲಾಖೆಯು ಯೋಜನೆಯ ಅನುಷ್ಠಾನ ಅಂಗವಾಗಿ ಬಿಡ್ಡಿಂಗ್ ಪ್ರಕ್ರಿಯೆ ಆರಂಭಿಸಿದ್ದು, ಸೀಪ್ಲೇನ್ ಸೇವೆಯ ನಿರ್ವಹಣೆಗೆ ಆಸಕ್ತಿಯ ಅಭಿವ್ಯಕ್ತಿಗೆ (Expression of Interest for Management of Seaplane Services) ಆಹ್ವಾನ ನೀಡಿತ್ತು.
ರಾಜ್ಯದ 320 ಕಿ.ಮೀ. ಉದ್ದದ ಕಡಲ ಕಿನಾರೆ ಮತ್ತು ಅನೇಕ ಅಣೆಕಟ್ಟುಗಳು ಜಲವಿಮಾನ ಸೇವೆಗೆ ದೊಡ್ಡ ಅವಕಾಶ ವಾಗಿದ್ದು, ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದ ಉತ್ತೇಜನ ದೊರೆಯಲಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳು.
ಕೇವಲ ಕಬಿನಿ- ಮಂಗಳೂರು ಮಾತ್ರ ಅಲ್ಲದೆ, ಮೈಸೂರು ಕೆ ಆರ್ ಎಸ್ ಡ್ಯಾಂ, ಶಿವಮೊಗ್ಗ (ತುಂಬಾ ನದಿ), ಹಂಪಿ (ತುಂಬಾಭದ್ರ ಅಣೆಕಟ್ಟು), ವಿಜಯಪುರ ಆಳಮಟ್ಟಿಡ್ಯಾಂ, ಕಾರವಾರ ಕಾಳಿ ನದಿ ಅಳಿವೆ, ಬೆಳಗಾವಿ ಹಿಡಕಲ್ ಡ್ಯಾಂ ಗಳನ್ನು ಜಲವಿಮಾನನಿಲ್ದಾಣಕ್ಕಾಗಿ ಗುರುತಿಸಿದ್ದು, ಪ್ರವರ್ತಕರು ರಾಜ್ಯದ ಇನ್ನಿತರ ಅರ್ಹ ಕೇಂದ್ರಗಳನ್ನು ಗುರುತಿಸಬಹುದು ಎಂದು ಸರಕಾರ ಹೇಳಿದೆ.
ಕೇಂದ್ರ ಸರಕಾರ ಈಗಾಗಲೇ ಇವುಗಳೊಂದಿಗೆ ಕರ್ನಾಟಕ ಕರಾವಳಿಯ ಉಡುಪಿಯ ಮಲ್ಪೆ, ಬೈಂದೂರು,ಲಿಂಗನಮಕ್ಕಿ ಜಲಾಶಯದಲ್ಲಿ ಸಿಗಂದೂರು ಸಮೀಪ, ಸೂಪ ಜಲಾಶಯದ ಗಣೇಶಗುಡಿ ಪ್ರದೇಶದಲ್ಲಿ ವಾಟರ್ ಎರೋ ಡ್ರಮ್ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ.
ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಮಹತ್ವದ ಪ್ರವಾಸೋದ್ಯಮ ಯೋಜನೆ ಆರಂಭ ಆಗುತ್ತಿರುವುದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಸೀಪ್ಲೇನ್ ಸೇವೆ ಆರಂಭವಾದಾಗ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ತಿರುವು ದೊರೆಯಲಿದೆ ಎನ್ನುತ್ತಾರೆ ಕರಾವಳಿಯ ಪ್ರವಾಸೋದ್ಯಮ ಪ್ರವರ್ತಕರು.
ಕೇರಳದ ಕಾಸರಗೋಡಿನಲ್ಲಿ ಕೂಡ ವಾಟರ್ ಎರೋ ಡ್ರಮ್ ನಿರ್ಮಾಣ ಆಗಲಿದೆ.
ಜಲವಿಮಾನ ಸೌಲಭ್ಯದಿಂದಾಗಿ ಪ್ರವಾಸಿಗರಿಗೆ ಮತ್ತು ಜನಸಮಾನ್ಯರಿಗೆ ಕೂಡ ಒಂದೂರಿನಿಂದ ಇನ್ನೊಂದು ಊರಿಗೆ ಸಂಚಾರ ಸಮಯದಲ್ಲಿ ಉಳಿತಾಯ ಆಗುತ್ತದೆ. ಪ್ರವಾಸಿತಾಣಗಳಿಗೆ ಸಂಪರ್ಕ ಸೌಲಭ್ಯ ಉತ್ತಮ ಆಗುವುದರಿಂದ ಪ್ರವಾಸಿಗರ ಸಂಖ್ಯೆಹೆಚ್ಚಾಗುವುದು.
ದೇಶದ ಒಟ್ಟು ಪ್ರವಾಸಿಗರಲ್ಲಿ ಶೇಕಡ 9.8 ರಷ್ಟು ಪ್ರವಾಸಿಗರು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಪ್ರಮಾಣದಲ್ಲಿ ಏರಿಕೆಯಾಗುವುದರೊಂದಿಗೆ ಸುಸ್ಥಿರ ಪ್ರವಾಸೋದ್ಯಮ ಪ್ರಗತಿ ಆಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ದಿಲೀಪ್ ಕುಮಾರ್.
ಜಲವಿಮಾನ ವ್ಯವಸ್ಥೆ ಕಡಿಮೆ ಬಂಡವಾಳದ ಪರಿಸರ ಪ್ರೇಮಿ ಸಂಪರ್ಕ ವ್ಯವಸ್ಥೆಯಾಗಿದ್ದು, ಮಾಲ್ದೀವ್ಸ್ ವಿಶ್ವದಲ್ಲೇ ಹೆಚ್ಚಿನ ಜಲವಿಮಾನ ಸೌಲಭ್ಯ ಹೊಂದಿರುವ ದ್ವೀಪರಾಷ್ಟ್ರ. ನಮ್ಮ ದೇಶದ ಅಂಡಮಾನ್ ನಿಕೋಬಾರ್, ಗುಜರಾತ್, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಜಲವಿಮಾನ ಸೌಲಭ್ಯ ಕಲ್ಪಿಸುವ ಕಾಮಗಾರಿ 3ನೇ ಹಂತದ ಉಡಾನ್ ಯೋಜನೆಯಡಿ ಅನುಷ್ಠಾನ ಆಗುತ್ತಿದೆ.
ನಮ್ಮ ರಾಜ್ಯದಲ್ಲಿ ಉಡಾನ್ 5.5 ಪ್ರಕಾರ ಜಲವಿಮಾನ ಸೌಲಭ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಉಡಾನ್ ಯೋಜನೆ ಕೆಳಕಾಲ ಸ್ಥಗಿತವಾದ ಪರಿಣಾಮ ರಾಜ್ಯದ ಕಲ್ಬುರ್ಗಿ ಮತ್ತು ಮೈಸೂರಿನಂತಹ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಗಮನಾರ್ಹವಾಗಿ ಕಡಿಮೆಯಾಗಿದೆ. ಕರ್ನಾಟಕ ಸರಕಾರ ಜಲವಿಮಾನ ಕಾರ್ಯಕ್ರಮ ಮೂಲಕ ಉಡಾನ ಯೋಜನೆಯ ಪ್ರಯೋಜನ ಪಡೆದು ಎರಡು ಮತ್ತು ಮೂರನೇ ಹಂತದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಮುಂದಾಗಿದೆ.
ಜಲವಿಮಾನ | Seaplane
17 ಅಥವ 19 ಸೀಟುಗಳ ಕಿರುಗಾತ್ರದ ಪ್ರಯಾಣಿಕ ವಿಮಾನಗಳನ್ನು ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಜಲಾಶಯಗಳಲ್ಲಿ ತೇಲುವ , ಟೇಕಾಫ್ ಮತ್ತು ಇಳಿಯಲು ಸಹಾಯವಾಗುವಂತೆ ಮಾರ್ಪಾಡು ಮಾಡಲಾಗದ ವಿಮಾನ ಇದಾಗಿದ್ದು, ಇವುಗಳನ್ನು ಕಡಿಮೆ ದೂರದ ಸಂಚಾರಕ್ಕೆ ಬಳಸಲಾಗುತ್ತದೆ. ಬಹುಮುಖ್ಯವಾಗಿ ಇವುಗಳ ನಿರ್ವಹಣೆಗೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ, ಭೂಸ್ವಾಧೀನ ಬೇಕಾಗಿರುವುದಿಲ್ಲ.
ಸೀಪ್ಲೇನ್ ಕಾರ್ಯಾಕಂಭಗೊಂಡಾಗ ಸ್ಥಳೀಯ ಸಂಚಾರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ.
ಒಳನಾಡು ಜಲಸಾರಿಗೆ Mangalore Water metro
ಮಂಗಳೂರಿನಲ್ಲಿ ಇನ್ನೊಂದು ಮಹತ್ವದ ಪ್ರವಾಸೋದ್ಯಮ ಮತ್ತು ಸಾರಿಗೆ ಯೋಜನೆ ಅನುಷ್ಠಾನ ಆಗಲಿದ್ದು, ಮಂಗಳೂರು ವಾಟರ್ ಮೆಟ್ರೋ (Mangalore Water metro) ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಕೇರಳ ರಾಜ್ಯಸರಕಾರದ ಸಹಭಾಗಿತ್ವದ ಕೊಚ್ಚಿ ವಾಟರ್ ಮೆಟ್ರೋ ಕಂಪೆನಿಗೆ ವಹಿಸಿಕೊಳ್ಳಲಾಗಿದೆ (Kochi Water Metro Limited (KWML)).
ಮಂಗಳೂರು ವಾಟರ್ ಮೆಟ್ರೋ ಯೋಜನೆಯ ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧವಾಗುತ್ತಿದೆ. ಇನ್ನಿತರ ತಾಂತ್ರಿಕ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಕರ್ನಾಟಕ ಸರಕಾರದ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಅಧಿಕಾರಿ ಶಶಿಧರ್ ತಿಳಿಸಿದ್ದಾರೆ.
ಜಲಸಾರಿಗೆ ಅತ್ಯಂತ ಕಡಿಮ ವೆಚ್ಚದ ಸಾರಿಗೆ ವ್ಯವಸ್ಥೆ ಆಗಿದ್ದು, ರಾಜ್ಯದಲ್ಲಿ ಜಲ ಸಾರಿಗೆ ಇಲಾಖೆ ಮತ್ತು ಜಲಮಾರ್ಗಗಳ ಅವಕಾಶ ಇದ್ದರೂ ಜಲಸಾರಿಗೆ ಅಭಿವದ್ಧಿ ಆಗಿಲ್ಲ. ಈ ನಿಟ್ಟಿನಲ್ಲಿ ಮಂಗಳೂರು ವಾಟರ್ ಮೆಟ್ರೋ ಮಹತ್ವದ ಪ್ರಯತ್ನವಾಗಲಿದೆ. 270 ಕೋಟಿ ರೂಪಾಯಿ ವೆಚ್ಚದ ಪರಿಸರ ಪ್ರೇಮಿ ಮಂಗಳೂರು ವಾಟರ್ ಮೆಟ್ರೋ ಅರಬ್ಬಿ ಸಮುದ್ರ, ನೇತ್ರಾವತಿ, ಗುರುಪುರ ನದಿಗಳ ತೀರದ 17 ಊರುಕೇರಿಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿದೆ. ಇದು ಬಜಾಲ್ ನಿಂದ ಆರಂಭಗೊಂಡು ಸೋಮೇಶ್ವರ,ಜಪ್ಪಿನ ಮೊಗರು, ಬೋಳಾರ, ಉಳ್ಳಾಲ-ಕೋಟೆಪುರ, ಹೊಯಿಗೆ ಬಜಾರ್, ಬೆಂಗ್ರೆ, ಹಳೆಬಂದರು, ಬೋಳೂರು ಬೊಕ್ಕಪಟ್ಣ, ತಣ್ಣೀರುಬಾವಿ, ಸುಲ್ತಾನ್ ಬತ್ತೇರಿ, ನವಮಂಗಳೂರು ಬಂದರು, ಬಂಗ್ರ ಕುಳೂರು , ಕುಳೂರು ಸೇತುವೆ, ಬೈಕಂಪಾಡಿ ಕೈಗಾರಿಕಾ ಪ್ರದೇಶ, ಕುಂಜತ್ತಬೈಲ್, ಮರವೂರು ಸೇತುವೆ ಬಳಿ ಮುಕ್ತಾಯವಾಗಲಿದೆ.
ಮಂಗಳೂರು ವಾಟರ್ ಮೆಟ್ರೋ ಪ್ರವಾಸಿಗರ ಆಕರ್ಷಣೆಯು ಆಗಲಿದೆ ಮತ್ತು ಸ್ಠಳೀಯ ಸಂಪರ್ಕ ಸಾರಿಗೆಯನ್ನು ಉತ್ತಮಗೊಳಿಸಲಿದೆ ಎನ್ನುತ್ತಾರೆ ಅಧಿಕಾರಿಗಳು. ಜಲಸಾರಿಗೆಯಿಂದ ಮಂಗಳೂರು ನಗರ ಪ್ರದೇಶದ ಹೆದ್ದಾರಿಗಳಲ್ಲಿ ವಾಹನ ದಟ್ಟಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಮಾಡಲಿದೆ.
ವಾಟರ್ ಮೆಟ್ರೋ ಮಾದರಿಯಲ್ಲೇ ಸರಕು ಮತ್ತು ವಾಹನ ಸಾಗಾಣಿಕೆಗಾಗಿ ಬಾರ್ಜ್ ಸೌಲಭ್ಯವನ್ನು ಆರಂಭಿಸಲು ಸ್ಠಳೀಯಾಡಳಿತ ಮುಂದಾಗಬೇಕು ಎಂದು ಬೀಚ್ ಟೂರಿಸಂ ವಲಯದಲ್ಲಿ ತೊಡಗಿರುವ ಸಾರ್ವಜನಿಕ ವಲಯದ ಮಾಜಿ ಬ್ಯಾಂಕ್ ಅಧಿಕಾರಿ ಯತೀಶ್ ಬೈಕಂಪಾಡಿ ಸಲಹೆ ಮಾಡಿದ್ದಾರೆ.
ಸರಕಾರ ತರುತ್ತಿರುವ ಹೊಸ ಯೋಜನೆಗಳು ಸ್ವಾಗತಾರ್ಹ. ಬೆಳೆಯುತ್ತಿರುವ ಮಂಗಳೂರು ಮಹಾನಗರದ ಸಾರಿಗೆ ನಿಟ್ಟಿನಲ್ಲಿ ಬಾರ್ಜ್ ಸೌಲಭ್ಯವನ್ನು ಆರಂಭಿಸುವುದು ಅಗತ್ಯ ಅನಿಸುತ್ತದೆ ಎಂದಿದ್ದಾರೆ ಬೈಕಂಪಾಡಿ.
ಇಂಟರ್ ನೇಶನಲ್ ಕ್ರೂಸ್ ಟರ್ಮಿನಲ್ ಯೋಜನೆಯನ್ನು ಕೂಡ ಸರಕಾರ ಘೋಷಿಸಿದೆ. ಸದ್ಯ ನವಮಂಗಳೂರು ಬಂದರು ಪ್ರಾಧಿಕಾರದ ಕ್ರೂಸ್ ಬರ್ತ್ ಮೂಲಕ ವಿದೇಶಿ ಪ್ರವಾಸಿ ಹಡಗುಗಳನ್ನು ನಿರ್ವಹಿಸಲಾಗುತ್ತಿದೆ. ರಾಜ್ಯ ಸರಕಾರ ಇಂಟರ್ ನೇಶನಲ್ ಕ್ರೂಸ್ ಟರ್ಮಿನಲ್ ಘೋಷಣೆ ಮಾಡಿದೆ.





